ಹೊಸ ಉದ್ಯಮಿಗಳ ಸವಾಲುಗಳು -ಭಾಗ 1

ಅನೇಕ ವರ್ಷಗಳ ಕಾಲ ಕೆಲಸ ಮಾಡಿ ಪರಿಣಿತಿಯನ್ನು ಸಂಪಾದಿಸಿ ನಂತರ ಉದ್ಯಮವನ್ನು ಆರಂಭಿಸುವ ಉದ್ಯಮಿಗಳಿಗೆ ತಮ್ಮದೇ ಆದ ನೆಟ್ ವರ್ಕ್, ಪ್ರಾಜೆಕ್ಟ್ ಮತ್ತು ಬ್ಯಾಕಪ್ ಗಳಿರುತ್ತವೆ. ಆದರೆ ಕನಸುಗಳನ್ನು ಹೊತ್ತು, ಸತತ ಆಲೋಚನೆಯಿಂದ ಸ್ವಂತದ್ದೊಂದು ಉದ್ಯಮವನ್ನು ಆರಂಭಿಸಲು ತೊಡಗುವ ನವೋದ್ಯಮಿಗಳಿಗೆ ಹಲವು ಸವಾಲುಗಳು ಎದುರಾಗುತ್ತವೆ. ತಮ್ಮ ಬಳಿ ಅತ್ಯುತ್ತಮ ಮತ್ತು ವಿಶೇಷವಾದ ಉತ್ಪನ್ನ , ಸೇವೆ ಅಥವಾ ಐಡಿಯಾ ಇದೆಯೆಂದು ಉದ್ಯಮಕ್ಕೆ ಕಾಲಿಡುವ ಮೊದಲು ಅವರು ಅನೇಕ ವಿಷಯಗಳನ್ನು ಸಂಗ್ರಹಿಸಿರುತ್ತಾರೆ. ಉತ್ಪನ್ನವನ್ನು ತಯಾರಿಸುವ ಬಗೆಗೆ ಅಪರಿಮಿತವಾದ ಸ್ಪಷ್ಟತೆಯಿರುವ ಯುವ ಜನಾಂಗ, ಅದನ್ನು ಯಾರಿಗೆ ತಲುಪಿಸಬೇಕು ಮತ್ತು ಹೇಗೆ ತಲುಪಿಸಬೇಕು, ಅದಕ್ಕೆ ತಗುಲುವ ಸಮವೆಷ್ಟು ಎನ್ನುವುದನ್ನು ಗಮನಿಸಲು ಹೋಗುವುದಿಲ್ಲ. ಅದರ ಕಡೆಗೆ ಗಮನ ಹರಿಸಲು ಮತ್ತೊಬ್ಬ ಬಿಸಿನೆಸ್ ಡೆವೆಲಪ್’ಮೆಂಟ್ ಆಫೀಸರ್ ನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಹೊಸ ಉದ್ಯಮಿಗಳಿಗೆ ಆ ಹುದ್ದೆಗೆ ಕೊಡುವಷ್ಟು ವೇತನ ಚೈತ್ಯನ್ಯ ಸಂಸ್ಥೆಗಿರಬೇಕಲ್ಲ. ಬ್ಯಾಕಪ್ ಇರುವಂತಹ ಡೈರೆಕ್ಟರ್ ಗಳು ಅಥವಾ ಸಂಸ್ಥೆಯಾದರೆ ವೇತನವನ್ನು ಕೊಟ್ಟು ನಿಭಾಯಿಸಿಕೊಳ್ಳಬಹುದು ಆದರೆ ಅದಿಲ್ಲದಿದ್ದರೆ ಕಷ್ಟ. ಸ್ವಯಂಸೇವೆಗಾಗಿ ಬರುವವರಿದ್ದರೆ ಸ್ವಲ್ಪ ಮಟ್ಟಿಗೆ ಹಾಯೆನಿಸುತ್ತದೆ. ಆದರೆ ಎಷ್ಟು ದಿನಗಳ ಕಾಲ ಸಂಬಳವಿಲ್ಲದೆ ಆ ಕೆಲಸವನ್ನು ಪೂರ್ಣಮನಸ್ಸಿನಿಂದ ಸ್ವಯಂಸೇವೆ ನಿರ್ವಹಿಸಲು ಸಾಧ್ಯ?.

ಸವಾಲುಗಳಲ್ಲಿ ಮುಖ್ಯವಾದ ಅಂಶವೆಂದರೆ ಮಾರ್ಕೆಟಿಂಗ್.ಬ್ಯುಸಿನೆಸ್ ಡೆವೆಲಪ್’ಮೆಂಟ್ ಬ್ಯುಸಿನೆಸ್ ಟು ಬ್ಯುಸಿನೆಸ್ ಗಳ ಬಗ್ಗೆ ಮತ್ತು ಕಂಪನಿಗಳ ಸಿಇಓಗಳ ಜೊತೆ ನೇರ ಸಂಪರ್ಕದಲ್ಲಿರುತ್ತದೆ. ಆದರೆ ಎಲ್ಲವೂ ಗೆದ್ದಂತಾಗುವುದಿಲ್ಲ. ಜನರ ಮಿಡಿತಕ್ಕೆ ಮತ್ತು ಮನಸ್ಸಿಗೆ ಆ ಉತ್ಪನ್ನ ಅಥವಾ ಸೇವೆ ಪೂರ್ಣವಾಗಿ ತಲುಪಬೇಕಾದ ಅನಿವಾರ್ಯತೆಯಿರುತ್ತದೆ. ಆಗ ಬರುವುದೇ ಮಾರ್ಕೆಟಿಂಗ್. ಎಲ್ಲ ಜನರನ್ನು ಒಂದೇ ಬಾರಿಗೆ ತಲುಪಲು ದೊಡ್ಡ ಮಟ್ಟದ ಅಬಿಯಾನ, ಜಾಹೀರಾತುಗಳು ಬೇಕಾಗುತ್ತದೆ. ಅದಕ್ಕೆ ಖರ್ಚೂ ಸಹ ಹೆಚ್ಚು. ಹೀಗಿರುವಾಗ ನವೋದ್ಯಮಿಗಳಿಗೆ ಅಷ್ಟೊಂದು ಭಾರಿ ಮೊತ್ತವನ್ನು ತೂಗಿಸಲು ಸಾಧ್ಯವಾಗುವುದಿಲ್ಲ. ಸಿಗುವ ಮತ್ತು ಇರುವ ಸವಲತ್ತುಗಳನ್ನು ಬಳಸಿಕೊಂಡು ಜನರ ಕಡೆಗೆ ತಮ್ಮ ಉತ್ಪನ್ನ/ಸೇವೆಗಳನ್ನು ತಲುಪಿಸಬೇಕಾಗುತ್ತದೆ. ಪ್ರಸ್ತುತ ಡಿಜಿಟಲ್ ಮಾರ್ಕೆಟಿಂಗ್ ಮತ್ತು ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್ ಸ್ಟ್ರಾಟಜಿಗಳು ಚಾಲ್ತಿಯಲ್ಲಿರುವ ವಿಧಾನಗಳಾಗಿವೆ. ಕಾರ್’ಗಳಿಗೆ ಸಂಬಂಧಿಸಿದ ಉತ್ಪನ್ನಗಳು ಹೆಚ್ಚಾಗಿ ನೆಚ್ಚಿಕೊಂಡಿರುವುದು ಪಾಂಪ್ಲೆಟ್ ಮೂಲಕ ಮಾರ್ಕೆಟಿಂಗ್ ಮಾಡುವುದು. ಕಾರಿನ ವೈಪರ್ ಗಳಿಗೆ ಪಾಂಪ್ಲೆಟ್ ಗಳನ್ನು ಸಿಕ್ಕಿಸಿ ಜನರನ್ನು ಸೆಳೆಯುವುದು ಅದರ ಉದ್ದೇಶ. ಇದೇ ವಿಧಾನವನ್ನು ಹೌಸ್,ಅಪಾರ್ಟ್ಮೆಂಟ್ ಬ್ಯುಲ್ಡರ್ ಗಳು, ಇನ್ಸ್ಟಿಟ್ಯೂಷನ್ ನಡೆಸುವವರು ಮಾಡುತ್ತಾರೆ. ಇದು ಕೆಲ ಮಟ್ಟಿಗೆ ಪರಿಣಾಮಕಾರಿಯಾಗಿಯೂ ಇದೆ. ಆದರೆ ಲಕ್ಷ ಪಾಂಪ್ಲೆಟ್ ಗಳಲ್ಲಿ ೧೦೦-೨೦೦ ಜನ ಅದನ್ನು ಓದಿ ೧೦-೨೦ ಮಂದಿ ಅದರ ಸೇವೆಯನ್ನು ಪಡೆದುಕೊಂಡರೆ ಅದೊಂದು ಸಾಧನೆಯೇ ಆಗುತ್ತದೆ. ಸ್ಮಾರ್ಟ್ ಫೋನ್ ಕೈಯಲ್ಲಿರುವಾಗ ಪಾಂಪ್ಲೆಟ್ ಗಳ ಗೋಜಿಗೆ ಹೋಗುವುದನ್ನು ನಿಲ್ಲಿಸಿದ್ದೇವೆ. ಅಂಟಿಸಿದ/ಸಿಕ್ಕಿಸಿದ ಪಾಂಪ್ಲೆಟ್ ಗಳನ್ನು ಮುದುರಿ ಹಾಕಿ ಅಥವಾ ಕಾರನ್ನು ಒರೆಸಲು ಉಪಯೋಗಿಸುತ್ತೇವೆ. ಫೋನಿನಲ್ಲಿ ಹುಡುಕಿದರೆ ಹತ್ತಿರದ ಗರಾಜ್ / ಅಂಗಡಿ/ ಸ್ಟಾರ್ ರೇಟೆಡ್ ಇನ್ಸ್ಟಿಟ್ಯೂಷನ್, ಮುಂತಾದ ಅನೇಕ ವಿವರಗಳು ಕಣ್ಮುಂದೆ ಚಿತ್ರಗಳನ್ನು ವೀಡಿಯೋಗಳನ್ನು ಪೋಣಿಸಿಕೊಂಡು ಬರುವಾಗ ಪಾಂಪ್ಲೆಟ್ ನ ಗೊಡವೆಯೇಕೆ? ನವೋದ್ಯಮಿಗಳು ಡಿಜಿಟಲ್ ಮಾರ್ಕೆಟಿಂಗ್ ಕಡೆಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಪ್ರಾಡಕ್ಟ್ ಗಳ ಮೇಲೆ ಗಮನವಿರುವುದರಿಂದ ಆ ಸೇವೆಯನ್ನು ಔಟ್ ಸೋರ್ಸ್ ಮಾಡಿ ಪಡೆದುಕೊಳ್ಳಬಹುದು. ಕಡಿಮೆ ಖರ್ಚಿನಲ್ಲಿ ಪ್ಲಾಟ್ ಫಾರ್ಮ್ ಒದಗಿಸುವ ಅನೇಕ ಸಂಸ್ಥೆಗಳಿವೆ. ಅವುಗಳು ಉತ್ಪನ್ನದ/ಸೇವೆಯ ವಿವರಗಳನ್ನು ಪೂರ್ಣವಾಗಿ ಪಡೆದು ಸ್ಟ್ರಾಟಜಿಗಳನ್ನು ಮಾಡಿ ಉತ್ಪನ್ನದ/ಸೇವೆಯ ಪ್ರಚಾರವನ್ನು ಮಾಡುತ್ತವೆ.

ಹಣಕಾಸಿನ ನಿರ್ವಹಣೆ ನವೋದ್ಯಮಿಗಳಿಗೆ ಮತ್ತೊಂದು ಸವಾಲು. ತಮ್ಮಲ್ಲಿ ಇರುವ ಹಣವನ್ನು ಉತ್ಪನ್ನಗಳಿಗೆ / ಸೇವಾ ಕಛೇರಿಗಳ ನಿರ್ಮಾಣಕ್ಕೆ ಉಪಯೋಗಿಸಿರುತ್ತಾರೆ. ಸಹಜ ಮತ್ತು ಅಗತ್ಯವಾಗಿ ಆಗಬೇಕಾದದ್ದೇ ಆದ್ದರಿಂದ ಅದರಲ್ಲಿ ಉಳಿತಾಯ ಅಥವಾ ಎರಡನೇ ಯೋಚನೆಯೇ ಇಲ್ಲ. ಉತ್ಪನ್ನದ ಗುಣಮಟ್ಟ, ಬಣ್ಣ, ಹೊದಿಕೆ ಎಲ್ಲವೂ ಮುಖ್ಯವಾಗುತ್ತದೆಯಾದ್ದರಿಂದ ಅದಕ್ಕೆ ಹಣವನ್ನು ವಿನಿಯೋಗಿಸಲೇಬೇಕು. ಇವೆಲ್ಲವನ್ನೂ ಒಂದೆಡೆ ಇಡಬೇಕಾದ್ದರಿಂದ ಕಛೇರಿ , ಗೋಡೌನ್ ಗಳ ಅವಶ್ಯಕತೆ ಇದ್ದೇ ಇದೆ. ಅದಕ್ಕೂ ಹಣ ವಿನಿಯೋಗಿಸಲೇಬೇಕು. ಅವು ಬೇಸಿಕ್ /ಮೂಲಭೂತವಾದ ಅಂಗಗಳು. ಟಾಕ್ಸ್ ಕಂಸಲ್ಟಂಟ್/ಸಾಫ್ಟ್ ವೇರ್/ ಸೇವಾ ಕೇಂದ್ರಗಳಿಗೆ (ಸರ್ವೀಸ್ ಸೆಂಟರ್) ಕಛೇರಿಯ ಅವಶ್ಯಕತೆಯಿದ್ದೇ ಇದೆ. ಕಛೇರಿಯೆಂದಾದ ಮೇಲೆ ಅದಕ್ಕೆ ಬಾಡಿಗೆ, ವಿದ್ಯುತ್, ನೌಕರರಿಗೆ ಅವಶ್ಯವಾದ ಕೋಣೆಗಳು ಬೇಕಾಗುತ್ತದೆ. ಅಲ್ಲಿರುವ ವಸ್ತುಗಳನ್ನು ಕಾಯಲು ಸೆಕ್ಯುರಿಟಿ ಅಥವಾ ಸೆಕ್ಯುರಿಟಿ ಕೆಮೆರಾಗಳು ಹೀಗೆ ಹಲವು ಖರ್ಚುಗಳು ಬಂದೇ ಬರುತ್ತವೆ. ಇವುಗಳಲ್ಲಿ ಪ್ರಯಾರಿಟಿಯನ್ನು ಹಾಕಿಕೊಳ್ಳಬೇಕು. ಸಂಸ್ಥೆಯ ಹೆಸರು ಎದ್ದು ಕಾಣಲು ಪ್ಲೆಕ್ಸ್ ಬೋರ್ಡ್/ಪೈಂಟ್ ಮಾಡಿಸಿದ ಬೋರ್ಡ್ ಸಾಕಿರುತ್ತದೆ. ಹೊಳೆಯುವ ಡಿಜಿಟಲ್ ಬೋರ್ಡ್ ಗಳ ಅವಶ್ಯಕತೆಯಿಲ್ಲ. ಮುಂದೆ ಚೆನ್ನಾದ ವ್ಯಾಪಾರವಾಗುತ್ತದೆಯಲ್ಲ ಆಗ ಆ ಬೋರ್ಡ್ ಗಳ ಕಾರ್ಯಕ್ಕೆ ಕೈ ಹಾಕಬಹುದು. ಆರಂಭದಲ್ಲೇ ವೃಥಾ ಖರ್ಚುಗಳನ್ನು ನಿಗ್ರಹಿಸಬೇಕು. ಆ ಹಣವನ್ನು ಪ್ರಚಾರಕ್ಕೆ ಬಳಸಿಕೊಂಡರೆ ಸಂಸ್ಥೆಯ ಹೆಸರು ಹೆಚ್ಚು ತಲುಪುತ್ತದೆ.

ಬಡ್ಜೆಟ್ ಗಳನ್ನು ನಿಭಾಯಿಸುವುದು ನಿರ್ವಹಿಸುವುದು ಹೇಗೆ ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ

ಇದರ ಜೊತೆಗೆ ನಾವು ತಿಳಿದುಕೊಳ್ಳಬೇಕಿರುವ ಹಲವು ಅಂಶಗಳಲ್ಲಿ ಕೆಲವು ಅಂಶಗಳೆಂದರೆ ನೌಕರರ ನೇಮಕ, ಹುದ್ದೆಗಳ ನಿಭಾವಣೆ, ಕೆಲಸದ ರೀತಿ-ನೀತಿ, ವೇತನ ನಿರ್ವಹಣೆ, ಸಂಸ್ಥೆಯ ಪ್ರಚಾರದ ಅವಧಿ ಮತ್ತು ಟಾರ್ಗೆಟ್ ಗಳನ್ನು ನಿರ್ಧರಿಸಿಕೊಳ್ಳುವುದು, ಮುಂತಾದವುದು ಇವುಗಳ ಬಗ್ಗೆಯೂ ತಿಳಿದಿಕೊಳ್ಳೋಣ

– ಹರೀಶ್ ಆತ್ರೇಯ

Medhasvi Expertise Pvt Ltd

Medhasvi Digital Markting

Leave a Reply

Your email address will not be published. Required fields are marked *